ಮೆರಠ್ 
ಭಾರತದ ಉತ್ತರ ಪ್ರದೇಶ ರಾಜ್ಯದ ಒಂದು ವಿಭಾಗ, ಜಿಲ್ಲೆ ಮತ್ತು ಜಿಲ್ಲಾ ಆಡಳಿತ ಕೇಂದ್ರ ನಗರ. ಇದನ್ನು ಮೀರತ್ ಎಂದೂ ಕರೆಯುವುದುಂಟು.

	ಮೆರಠ್ ವಿಭಾಗಕ್ಕೆ ಡೆಹರಾಡೂನ್, ಸಹಾರನ್‍ಪುರ, ಮುಜಫರ್‍ನಗರ, ಮೆರಠ್, ಬುಲಂದ್ ಶಹರ್ ಈ ಜಿಲ್ಲೆಗಳು ಸೇರಿದ್ದು ಸು. 23.900 ಚಕಿಮೀ ವಿಸ್ತೀರ್ಣವಿದೆ. ಜನಸಂಖ್ಯೆ 34,04,000 (1991).

	ಮೆರಠ್ ಜಿಲ್ಲೆ : ಗಂಗಾ ಮತ್ತು ಯಮುನಾ ನದಿಗಳ ಫಲವತ್ತಾದ ಮಧ್ಯ ಬಯಲು ಪ್ರದೇಶವನ್ನೊಳಗೊಂಡಿರುವ ಈ ಜಿಲ್ಲೆಯಲ್ಲಿ ಬಾಗಪತ್, ಸರ್ದನ, ಮವಾನ ಮತ್ತು ಮೆರಠ್ ತಹಸೀಲ್‍ಗಳು ಸೇರಿದ್ದು ಒಟ್ಟು ವಿಸ್ತೀರ್ಣ 6019 ಚಕಿಮೀ. ಜನಸಂಖ್ಯೆ 27,67,246 (1981). ಗಂಗಾ ಮೇಲ್ಗಾಲುವೆ ಮತ್ತು ಪೂರ್ವ ಯಮುನಾ ನದಿಯ ಕಾಲುವೆಯಿಂದ ದೊರೆಯುವ ನದಿ ನೀರಿನಿಂದ ಸಮೃದ್ಧಿಯಾಗಿ ಗೋದಿ, ಕಬ್ಬು, ವಿವಿಧ ಬಗೆಯ ದ್ವಿದಳಧಾನ್ಯಗಳು, ಎಣ್ಣೆ ಬೀಜಗಳು ಇವುಗಳನ್ನು ಬೆಳೆಯುತ್ತಾರೆ. ಈ ಜಿಲ್ಲೆಯ ಫಜಿಯಾಬಾದ್ ಮತ್ತು ಮೋದಿನಗರ್ ಮುಖ್ಯ ಕೈಗಾರಿಕಾ ಕೇಂದ್ರಗಳು.

	ಮೆರಠ್ ನಗರ : ದೆಹಲಿಯ ಈಶಾನ್ಯದಲ್ಲಿ 40 ಕಿಮೀ. ದೂರದಲ್ಲಿರುವ ಈ ಮಹಾನಗರ ಉತ್ತರಪ್ರದೇಶದ ಮೆರಠ್ ವಿಭಾಗದ, ಜಿಲ್ಲೆಯ ಮತ್ತು ತಹಸೀಲಿನ ಆಡಳಿತ ಕೇಂದ್ರವಾಗಿದೆ. ಮೆರಠ್‍ನ ಗ್ರಾಮಾಂತರ ಪ್ರದೇಶ, ಕಂಟೋನ್‍ಮೆಂಟ್ ಪ್ರದೇಶ ಇವೆಲ್ಲ ಸೇರಿ ಒಟ್ಟು ಜನಸಂಖ್ಯೆ .61.211 (1981). ನಗರಪ್ರದೇಶದ ಜನಸಂಖ್ಯೆ 5.36.615 (1981). 

	ಮೆರಠ್ ನಗರ ಉತ್ತರಭಾರತದ ಹಾಗೂ ಉತ್ತರ ಪ್ರದೇಶದ ಅನೇಕ ಮುಖ್ಯ ರೈಲ್ವೆ ಮತ್ತು ರಸ್ತೆಗಳ ಕೂಡು ತಾಣವಾಗಿದೆ. ವ್ಯವಸಾಯೋತ್ಪನ್ನ ವಸ್ತುಗಳ ಹಾಗೂ ಧಾನ್ಯದ ಮಾರಾಟ ಕೇಂದ್ರ. ಇಲ್ಲಿ ಲೋಹ ಮೂಲದ ಲೋಹಗಳನ್ನು ಕರಗಿಸುವ. ಎರಕಹೊಯ್ಯವ ಕೈಗಾರಿಕೆಗಳಿವೆ. ಗೃಹ ಕೈಗಾರಿಕೆಗಳೂ ಅಭಿವೃದ್ಧಿ ಸ್ಥಿತಿಯಲ್ಲಿವೆ. ಹತ್ತಿಬಟ್ಟೆ, ಸಕ್ಕರೆ ರಸಾಯನಿಕ ವಸ್ತುಗಳ ತಯಾರಿಕೆ, ಎಣ್ಣೆ ಬೀಜಗಳ ಸಂಸ್ಕರಣ ಮತ್ತು ಎಣ್ಣೆ ತೆಗೆಯುವ ಕಾರ್ಖಾನೆಗಳಿವೆ. ಬಣ್ಣಗಳ ತಯಾರಿಕೆ , ಚರ್ಮದ ವಿವಿಧ ಬಗೆಯ ಕೈಗಾರಿಕೆ, ಸಂಗೀತ ವಾದ್ಯಗಳನ್ನು ತಯಾರಿಸುವುದು ಮುಂತಾದ ಕೈಗಾರಿಕೆಗಳಿವೆ. ಈ ನಗರ 1806ರಿಂದಲೂ ಒಂದು ಮುಖ್ಯ ಭೂಸೇನಾ ಕೇಂದ್ರವಾಗಿದ್ದು ಪ್ರಾಮುಖ್ಯ ಪಡೆದಿದೆ.

	ವಿದ್ಯಾಭ್ಯಾಸದಲ್ಲೂ ಮೆರಠ್ ಪ್ರಗತಿ ಸಾಧಿಸಿವೆ. 1892 ರಲ್ಲಿ ಇಲ್ಲಿನ ಮೊದಲ ಕಾಲೇಜಿನ ಸ್ಥಾಪನೆ, 1965 ರಲ್ಲಿ ಮೆರಠ್ ವಿಶ್ವವಿದ್ಯಾಲಯದ ಸ್ಥಾಪನೆಯಾಯಿತು. ನಗರದಲ್ಲಿ 12ನೆಯ ಶತಮಾನದ ಕೆಲವು ಸಮಾಧಿ ಮಂದಿರಗಳೂ ಅನೇಕ ಪುರಾತನ ದೇವಾಲಯಗಳೂ ಮಸೀದಿಗಳೂ ಇವೆ.

	ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಮೆರಠ್ ಮುಖ್ಯಸ್ಥಾನ ಪಡೆದಿದೆ. ಡಾಲ್‍ಹೌಸಿಯ ಅನಂತರ ಗವರ್ನರ್ ಜನರಲ್ನಾಗಿ ಬಂದ ಲಾರ್ಡ ಕ್ಯಾನಿಂಗ್‍ನ ಕಾಲದಲ್ಲಾದ ಪ್ರಸಿದ್ಧ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮುಖ್ಯ ನೆಲೆಯಾಗಿ ನಿಂತಿತು. ಮೆರಠ್‍ನ ದೇಶೀಯ ಸೇನಾ ತುಕಡಿಯಲ್ಲಿ ಆಸ್ಫೋಟಗೊಂಡ ಈ ಕ್ರಾಂತಿ ಕ್ಷಿಪ್ರದಲ್ಲಿಯೇ ದೇಶದ ಇತರ ಭಾಗಗಳಲ್ಲಿಯೂ ಕಾಳ್ಗಿಚ್ಚಿನಂತೆ ಹರಡಿ ಬ್ರಿಟಿಷರನ್ನು ಸಲ್ಲಣಗೊಳಿಸಿತು. ಇದರಿಂದ ಬ್ರಿಟಿಷ್ ಸರ್ಕಾರ ಮುಂದೆ ತನ್ನ ನೀತಿಯಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿಕೊಳ್ಳುವಂತಾಯಿತು.

	1857ರ ಕ್ರಾಂತಿಯ ಬೆನ್ನೆಲುಬು ಸೈನ್ಯವಾಗಿತ್ತು. ಮದರಾಸು ಮತ್ತು ಮುಂಬಯಿ ಪ್ರಾಂತ್ಯ ಸೇನೆಗಳು ಬ್ರಿಟಿಷ್‍ರಿಗೆ ನಿಷ್ಠೆಯಿಂದ ಇದ್ದರೂ ಬಂಗಾಲ ಸೈನ್ಯ 1857ರ ಏಪ್ರಿಲ್‍ನಲ್ಲಿ ಮೆರಠ್‍ನಲ್ಲಿ ಬ್ರಿಟಿಷ್ ಸೈನ್ಯಧಿಕಾರಿಗಳ ಆಜ್ಞೆಯಂತೆ ತುಪಾಕಿಗಳನ್ನು ಹಿಡಿದು ಕವಾಯಿತು ಮಾಡಲು ನಿರಾಕರಿಸಿದ ಕಾರಣ ಸಾವಿರಾರು ದೇಶೀಯ ಸೈನಿಕರನ್ನು ಜೈಲಿಗೆ ತಳ್ಳಲಾಯಿತು. ಇದನ್ನು ಕಂಡ ಅನೇಕ ಅಸಹಾಯಕ ಭಾರತೀಯರು ಮಮ್ಮಲ ಮರುಗಿದರು. ಈ ಪರಿಣಾಮವಾಗಿ ರೊಚ್ಚಿಗೆದ್ದ ಉಳಿದ ಮೂರು ದೇಶಿಯ ಪಡೆಗಳು ಇದೇ ವರ್ಷ ಮೇ 10ರ ಸಂಜೆ ಮೆರಠ್ ನಗರದಲ್ಲಿ ಕೆರಳಿ ಸಿಡಿದೆದ್ದುವು. ಇದರಿಂದ ಬ್ರಿಟಿಷ್ ಅಧಿಕಾರಿಗಳಿಗೆ ಉಳಿಗಾಲವಿಲ್ಲವಾಯಿತು.  ಸೈನಿಕ ಪಡೆಯವರು ಸೆರೆಮನೆಯಲ್ಲಿದ್ದ ತಮ್ಮ ಸಂಗಡಿಗರನ್ನು ಬಿಡುಗಡೆ ಮಾಡಿದರು. ಕೆಲವೇ ಗಂಟೆಗಳ ಕಾರ್ಯಾಚರಣೆಯಿಲ್ಲದೆ ಹೋರಾಟಗಾರರು ದೆಹಲಿಯ ಅರಮನೆಯನ್ನು ಪ್ರವೇಶಿಸಿ ವೃದ್ಧನಾದ ಎರಡನೆಯ ಬಹದ್ದೂರ್ ಷಹನನ್ನು ಭಾರತದ ಸಮ್ರಾಟನೆಂದು ಘೋಷಿಸಿದರು.

	ಮೀರತ್ ದಂಗೆಯ ಬಳಿಕ, ಅಯೋಧ್ಯೆ, ರೋಹಿಲ್ ಖಂಡ್, ರಜಪುತಾನ, ಗ್ವಾಲಿಯರ್, ಲಕ್ನೋ, ದೆಹಲಿ, ಆಗ್ರಾ, ಪಾಟ್ನ, ಮತ್ತು ಮಧ್ಯಪ್ರದೇಶದ ಅನೇಕ ಪ್ರದೇಶಗಳಲ್ಲಿ ಬಂಡಾಯಗಳಾದವು.  ಬ್ಯಾರಕ್‍ಪುರ್ ಮತ್ತು ಮೀರತ್ ಮುಂತಾದ ದಂಗೆಗಳು ಮುಂದೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿಯಾದವು.  
(ಕೆ.ಜಿ.ವಿ.ಎಂ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ